ಅಸುತೋಷ ಮುಖರ್ಜಿ
(1864-1924). ಭಾರತೀಯ ಸಂಸ್ಕøತಿಯ ಉಚ್ಚತಮ ಪ್ರತೀಕವಾಗಿದ್ದು ಉದ್ಧಾಮ ಪಂಡಿತ, ದಕ್ಷ ಆಡಳಿತಗಾರ, ಸಮರ್ಥ ಉಪಕುಲಪತಿ ಎಂದು ಖ್ಯಾತಿ ಪಡೆದವರು. ಧರ್ಮಶ್ರದ್ಧೆಯನ್ನು ಹೊಂದಿದ್ದ ಬಂಗಾಳೀ ಬ್ರಾಹ್ಮಣ ವಿದ್ಯಾವಂತ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಲ್ಲೇ ಅಸಾಧಾರಣ ಪ್ರತಿಭೆಯನ್ನು ತೋರಿ ಕಲ್ಕತ್ತದ ಬಿ.ಎ. ಡಿಗ್ರಿ ಪಡೆದು ಮರುವರ್ಷವೇ ಗಣಿತಶಾಸ್ತ್ರ ತೆಗೆದುಕೊಂಡು ಎಂ.ಎ. ಪರೀಕ್ಷೆಯಲ್ಲಿ ಉಚ್ಚಸ್ಥಾನ ಗಳಿಸಿದರು (1884). ಸಂಸ್ಕøತದಲ್ಲೂ ಪಾಂಡಿತ್ಯ ಗಳಿಸಿದರು. 1888ರಲ್ಲಿ ವಕೀಲಿವೃತ್ತಿಯನ್ನು ಪ್ರಾರಂಭಿಸಿದರು. 1889 ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಸದಸ್ಯರಾದರು. 1894ರಲ್ಲಿ ಡಾಕ್ಟರ್ ಆಫ್ ಲಾಸ್ ಪ್ರಶಸ್ತಿ ಗಳಿಸಿದರು. 1899 ಮತ್ತು 1901ರಲ್ಲಿ ಬಂಗಾಳ ಶಾಸನ ಸಭೆಯ ಸದಸ್ಯರಾಗಿ ಆರಿಸಲ್ಪಟ್ಟರು. ಪಾಂಡಿತ್ಯ, ಕರ್ತವ್ಯನಿಷ್ಠೆಗಳನ್ನು ಕಂಡ ಸರ್ಕಾರ ಅವರಿನ್ನೂ ನಲವತ್ತು ವರ್ಷದವರಾಗಿದ್ದಾಗಲೇ ಕಲ್ಕತ್ತ ಶ್ರೇಷ್ಠನ್ಯಾಯಾಲದ ನ್ಯಾಯಾಧಿಪತಿಯನ್ನಾಗಿ ನೇಮಿಸಿತು. ಹತ್ತೊಂಬತ್ತು ವರ್ಷಕಾಲ ಈ ಪೀಠವನ್ನಲಂಕರಿಸಿ ಅತ್ಯಂತ ಸಮರ್ಥ ಮತ್ತು ನ್ಯಾಯನಿಷ್ಠ ನ್ಯಾಯಾಧೀಶರೆಂದು ಹೆಸರುಗಳಿಸಿದರು. 1906ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆರಿಸಲ್ಪಟ್ಟು ಎಂಟು ವರ್ಷ ಅದರ ಪ್ರಗತಿಗಾಗಿ ದುಡಿದರು. 1921-22ರಲ್ಲೂ ಅದೇ ಹುದ್ದೆಗೆ ಆರಿಸಲ್ಪಟ್ಟರು. 1902ರಲ್ಲಿ ಸ್ಥಾಪಿತವಾಗಿದ್ದ ವಿಶ್ವವಿದ್ಯಾಲಯಗಳ ನಿಯೋಗ ಆ ವಿದ್ಯಾಲಯಗಳ ಮೇಲೆ ಆಡಳಿತದ ಹತೋಟಿಯಿರಬೇಕೆಂದು ಮನವಿ ಮಾಡಿತ್ತು. ಇದು 1904ರಲ್ಲಿ ಕಾನೂನಾಗಿ ಹೊರಬಂತು. ವಿಶ್ವವಿದ್ಯಾಲಯ ಸರ್ಕಾರಿ ಹತೋಟಿಗೊಳಪಟ್ಟಿರಕೂಡದೆಂದು ಅಸುತೋಷರು ಕಾನೂನನ್ನು ಕಟುವಾಗಿ ವಿರೋಧಿಸಿದರು. ಡಾ|| ಸಿ. ವಿ. ರಾಮನ್ ಮುಂತಾದ ಪ್ರತಿಭಾವಂತ ಪ್ರಾಧ್ಯಾಪಕರನ್ನು ನೇಮಿಸಿಕೊಂಡು ಅವರಿಗೆ ಉತ್ತೇಜನಕೊಟ್ಟರು. ಅವರ ಆಡಳಿತದಲ್ಲಿ ಕಲ್ಕತ್ತ ವಿಶ್ವವಿದ್ಯಾಲಯ ನಾನಾಮುಖವಾಗಿ ಪ್ರಗತಿಹೊಂದಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ